ಮೊಹಾಲಿ ಕ್ರೀಡಾಂಗಣದಲ್ಲಿ ಭಾರತ ತಂಡದವರು ಮಂಗಳವಾರ ಅಭ್ಯಾಸ ನಡೆಸುವಾಗ ಸಚಿನ್ ಅಭಿಮಾನಿ ಸುಧೀರ್ ರಾಷ್ಟ್ರಧ್ವಜಹಿಡಿದು ಆಟಗಾರರಿಗೆ ಸ್ಫೂರ್ತಿ ನೀಡಿದರು. ಭಾರತ ತಂಡ ಆಡುವಾಗಲೆಲ್ಲಾ ಅಲ್ಲಿ ಸುಧೀರ್ ಉಪಸ್ಥಿತಿ ಇರುತ್ತದೆ. ವಿಶೇಷವೆಂದರೆ ಅಭ್ಯಾಸ ಮುಗಿಯುವವರೆಗೆ ಇವರು ರಾಷ್ಟ್ರಧ್ವಜ ಹಿಡಿದೇ ನಿಂತಿರುತ್ತಾರೆ. -ಎಎಫ್‌ಪಿ ಚಿತ್ರ.
ಭಾರತ-ಪಾಕಿಸ್ತಾನ ಪ್ರಧಾನಮಂತ್ರಿಗಳ ರಾಯಭಾರ ಹಾಗೂ ಮಹಾಸಮರವೆಂಬ ಸಮೂಹಸನ್ನಿಯ ನಡುವೆ ಕ್ರಿಕೆಟ್ ಗೆಲ್ಲಲಿ ಎಂಬ ಭಾವನೆಯೊಂದಿಗೆ ಮಹೇಂದ್ರಸಿಂಗ್ ದೋನಿ ಮತ್ತು ಶಾಹಿದ್ ಅಫ್ರಿದಿ ಮೈದಾನಕ್ಕಿಳಿಯಲಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಹತ್ತನೇ ವಿಶ್ವ ಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯ, ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ಮಧ್ಯಾಹ್ನ ನಡೆಯಲಿದೆ. ಎರಡೂ ದೇಶಗಳಲ್ಲಿ ಹಬ್ಬಿರುವ ಕ್ರಿಕೆಟ್ ಹುಚ್ಚು ಆಟಕ್ಕೆ ಕಿಚ್ಚು ಹಚ್ಚಲಿದೆ. ಭಾರತವೇ ಗೆಲ್ಲುವುದು ಎಂಬ ಕೂಗು ವಾಘಾ ಗಡಿಯಾಚೆ ಪಾಕಿಸ್ತಾನಿಗಳ ಕಿವಿಗಪ್ಪಳಿಸಲಿದೆ.
‘ಕ್ರಿಕೆಟ್ ಎರಡೂ ರಾಷ್ಟ್ರಗಳನ್ನು ಹತ್ತಿರ ತರಲಿ’ ಎಂಬ ಸದ್ಭಾವನೆಯನ್ನು ಇಬ್ಬರೂ ಪ್ರಧಾನಿಗಳು ಹಾಗೂ ತಂಡಗಳ ನಾಯಕರು ವ್ಯಕ್ತಪಡಿಸಿರುವರಾದರೂ, ಮೈದಾನದಲ್ಲಿ ತೀವ್ರ ಸೆಣಸಾಟ ಕಂಡುಬರುವುದಂತೂ ಖಂಡಿತ. ತಮ್ಮ ತಂಡವೇ ಗೆಲ್ಲಬೇಕೆಂಬ ನಿರೀಕ್ಷೆ ಎರಡೂ ರಾಷ್ಟ್ರಗಳಲ್ಲಿರುವುದು ಸಹಜವೇ ಆದರೂ, ಅದರ ಹಿಂದಿರುವ ಭಾವನೆಗಳು ಆಟಗಾರರ ಮೇಲೆ ಒತ್ತಡ ಹೇರಲಿವೆ.
No comments:
Post a Comment